ಈಜುಕೊಳ-
ಈಜಲು, ಮುಳುಗೇಳಲು, ಜಲಕ್ರೀಡೆ ಆಡಲು ರಚಿಸಿರುವ ದೊಡ್ಡ ಕೆರೆ (ಸ್ವಿಮ್ಮಿಂಗ್ ಪೂಲ್). ನಾಗರಿಕ ಜೀವನದ ಪ್ರಿಯಸಂಗಾತಿ ಈಜುಕೊಳ. ಪ್ರಾಚೀನ ರೋಂ ರಾಜ್ಯದಲ್ಲಿ 17 ಕೊಳಗಳಿದ್ದುವೆಂದೂ ಅವುಗಳಲ್ಲಿ ಒಂದು ಸಲಕ್ಕೆ 2,000-3,000 ಜನರು ಈಜುಬಹುದಿತ್ತೆಂದೂ ದಾಖಲೆ ಇದೆ. ಭಾರತದಲ್ಲಿ ದೇವಾಲಯಗಳ ಸಮೀಪ ಕೊಳಗಳಿರುವುದು ಸಂಪ್ರದಾಯ. ಇಲ್ಲಿ ಉದ್ದೇಶ ಭಕ್ತರು ಮಿಂದು ಶುಚಿರ್ಭೂತರಾಗಿ ದೇವಾಲಯ ಪ್ರವೇಶ ಮಾಡಬೇಕೆಂದು. ಈಜುವಿಕೆ (ಎಂದರೆ, ಅದರ ತಂತ್ರ ಅಥವಾ ಜಲಕ್ರೀಡೆಗಳು) ಕೇವಲ ಅನುಷಂಗಿಕ. ಈಜುವಿಕೆಯ ಉದ್ದೇಶವೊಂದರಿಂದಲೇ ರಚಿತವಾದ ಕೊಳಗಳು ನಿರ್ದಿಷ್ಟ ಮಾನಕಗಳನ್ನು ಹೊಂದಿರಲೇಬೇಕು-ಗಾತ್ರ, ನೀರಿನ ಶುದ್ಧೀಕರಣ, ವೇದಿಕೆಗಳ ವಿನ್ಯಾಸ, ಶೌಚಾಗೃಹಗಳು ಇತ್ಯಾದಿ. ಪ್ರಾಚೀನ ಭಾರತದಲ್ಲಿ ರಾಜರ ಅರಮನೆಗಳಲ್ಲಿ ಸಾಮಾನ್ಯವಾಗಿ ಈಜುಕೊಳಗಳಿರುತ್ತಿದ್ದುವು. ಸಾರ್ವಜನಿಕ ಈಜುಕೊಳಗಳಿದ್ದುದಕ್ಕೆ ನಿದರ್ಶನಗಳಿವೆ. ಹರಪ್ಪ ಮತ್ತು ಮೊಹೆಂಜೊದಾರೊಗಳಲ್ಲಿ ಕಂಡುಬಂದಿರುವ ಕೊಳಗಳು 5,000 ವರ್ಷಗಳ ಹಿಂದೆ ಕಟ್ಟಿದುವು. ವಿಜಯನಗರದ ರಾಜಧಾನಿ ಹಂಪೆಯಲ್ಲಿ 3,000 ಜನ ಕುಳಿತುನೋಡಲು ಅನುಕೂಲವಾಗುವಂತೆ ಅಟ್ಟಣೆಗಳಿಂದ ಕೂಡಿದ ಒಂದು ಕೊಳವಿತ್ತು. ಕ್ರೀಡಾರಂಗ ಬೆಳೆದಂತೆ ಈಜುವಿಕೆಯ ಮಹತ್ತ್ವ ಬಂದು ಎಲ್ಲ ಮುಂದುವರಿದ ರಾಷ್ಟ್ರಗಳಲ್ಲೂ ಅಗತ್ಯಕ್ಕೆ ತಕ್ಕ ಹಾಗೆ ಬೇಕಾದಷ್ಟು ಹಣವನ್ನು ವೆಚ್ಚಮಾಡಿ ಈಜುಕೊಳಗಳನ್ನು ನಿರ್ಮಿಸುತ್ತಿದ್ದಾರೆ.

	ಆಧುನಿಕ ಕೊಳಗಳಲ್ಲಿ ಬೇರೆ ಬೇರೆ ಅಗತ್ಯಗಳಿಗೆ ತಕ್ಕಹಾಗೆ ಬೇರೆ ಬೇರೆ ಆಳದ ವಿಭಾಗಗಳಿರುತ್ತವೆ-ಮಕ್ಕಳಿಗಾಗಿ, ಕಲಿಯುವವರಿಗಾಗಿ, ಸ್ಪರ್ಧೆಗಳಿಗಾಗಿ ಇತ್ಯಾದಿ. ವಾಟರ್ ಪೋಲೋ ಕೊಳಗಳು 4'-6' ಆಳ ಇರಬೇಕು. ಮುಳುಗೇಳಲೆಂದು (ಡೈವಿಂಗ್) ರಚಿಸಿರುವ ಕೊಳದ ಮೇಲಿನ ದುಮುಕು ಹಲಗೆ (ಡೈವಿಂಗ್ ಬೋರ್ಡ್) ಎಷ್ಟೇ ಎತ್ತರದಲ್ಲಿದ್ದರೂ ಕೊಳದ ಗರಿಷ್ಠ ಆಳ 15' ಇರಬೇಕಾಗುತ್ತದೆ. ದುಮುಕು ಹಲಗೆಗಳಾದರೋ 1, 3, 5 ಮತ್ತ್ತು 10 ಮೀಟರ್ ಎತ್ತರದಲ್ಲಿರುತ್ತವೆ. ಕೊಳದ ಉದ್ದಳತೆಯನ್ನು ನಿರ್ಧರಿಸುವುದು ನೆಲದ ಉದ್ದಳತೆ, ನಿರ್ಮಾಣಕ್ಕಾಗಿ ಒದಗಿಸಿರುವ ಹಣ, ಅದನ್ನು ಉಪಯೋಗಿಸುವ ಜನರ ಸಂಖ್ಯೆ ಮುಂತಾದುವುಗಳಿಂದ. ಒಂದು ಸಾಮಾನ್ಯ ಈಜುಕೊಳದ ಉದ್ದಳತೆಯ ವಿವರಗಳಿಷ್ಟು : 25'-60' ಅಗಲ, 50'-165' ಉದ್ದ. ಈಚೆಗೆ 100 ಮೀಟರ್ ಉದ್ದದ ಈಜುಸ್ಪರ್ಧೆಗಳನ್ನು ಏರ್ಪಡಿಸುತ್ತಿರುವುದರಿಂದ ಕೊಳಗಳನ್ನು 100 ಮೀಟರಿನ 1/3 ಅಥವಾ ಳಿ ಉದ್ದವಿಟ್ಟು ಕಟ್ಟಲಾಗುತ್ತಿದೆ. ಈ ಅಳತೆಗಳು ಅಂತರರಾಷ್ಟ್ರೀಯವಾದುವು. ಈಚೆಗಂತೂ ಚಿತ್ರವಿಚಿತ್ರ ವಿನ್ಯಾಸಗಳಲ್ಲಿ ಈಜುಕೊಳಗಳನ್ನು ನಿರ್ಮಿಸಲಾಗುತ್ತಿದೆ-ಚದರ, ಚತುರ್ದಶ, ವರ್ತುಲ, ಎಲೆಯ ಮಾದರಿ, ಹೃದಯದ ಮಾದರಿ ಇತ್ಯಾದಿ.

	ಈಜುಕೊಳಗಳು ಜಪಾನ್, ಅಮೆರಿಕಗಳಲ್ಲಿ ತುಂಬ ಜನಪ್ರಿಯವಾಗಿವೆ. ಈಗ ಜರ್ಮನಿಯಲ್ಲೂ ಹೆಚ್ಚುತ್ತಿವೆ. ಜಪಾನಿನಲ್ಲಿರುವ ಮಾಧ್ಯಮಿಕ ಮತ್ತು ಪ್ರೌಢಶಾಲೆಗಳಲ್ಲಿ ಮುಕ್ಕಾಲು ಭಾಗದವುಗಳಿಗೆ ಸ್ವಂತ ಈಜುಕೊಳಗಳಿವೆ. ಉಳಿದ ಪಾಠಗಳ ಜೊತೆಗೆ ಈಜನ್ನು ಕಡ್ಡಾಯವಾಗಿ ಎಲ್ಲ ವಿದ್ಯಾರ್ಥಿಗಳಿಗೂ ಕಲಿಸಲಾಗುತ್ತಿದೆ. ಅಮೆರಿಕದಲ್ಲಿ ತಲಾ ನಾಲ್ಕು ಕುಟುಂಬಗಳಿಗೆ ಒಂದರಂತೆ ಖಾಸಗಿ ಕೊಳಗಳಿವೆ. ಎಲ್ಲೆಲ್ಲಿ ಸ್ಥಳಾವಕಾಶವಿದೆಯೋ ಅಲ್ಲೆಲ್ಲ ಈಜುಕೊಳಗಳನ್ನು ಕಟ್ಟಿದ್ದಾರೆ-ತೋಟಗಳು, ಮನೆಯ ಆವರಣಗಳು, ಮನೆಯ ಹಿತ್ತಲುಭಾಗಗಳು, ಮನೆಯ ಮೇಲುಚಾವಣಿಗಳು ಹೀಗೆ. "ನಿಮ್ಮ ಹಿತ್ತಲಿನಲ್ಲಿ ಕೇವಲ ಮೂರೇ ದಿವಸಗಳಲ್ಲಿ ಒಂದು ಈಜಕೊಳ" ಎಂಬ ಜಾಹೀರಾತು ಅಮೆರಿಕದಲ್ಲಿ ಸಾಮಾನ್ಯ. ಮೊದಲೇ ಕೊಳಗಳನ್ನು ಎರಕಹೊಯ್ದು, ಲಾರಿಗಳಲ್ಲಿ ಸಾಗಿಸಿ, ಮೂರು ನಾಲ್ಕು ಗಂಟೆಗಳಲ್ಲಿ ನಿರ್ಮಿಸಿ ಮುಗಿಸುವುದುಂಟು. ಪ್ಲಾಸ್ಟಿಕ್ಕಿನಲ್ಲಿ ನಿರ್ಮಿಸಿ, ಸುರುಳಿ ಸುತ್ತಿ ಹೆಗಲ ಮೇಲೆ ಹೊತ್ತುಕೊಂಡು ಹೋಗಿ ಎಲ್ಲೆಂದರಲ್ಲಿ ಕೊಳವನ್ನು ಹೂಡಬಹುದು. ಆಮೇಲೆ ಮನೆಗೆ ಹಿಂದಕ್ಕೆ ತರಬಹುದು. ಹಡಗುಗಳಲ್ಲಿ, ಸ್ಟೀಮರುಗಳಲ್ಲಿ ಡೆಕ್ಕುಗಳ ಮೇಲೆ ಈಜುಕೊಳಗಳಿರುತ್ತವೆ. ಶೀತ ಪ್ರದೇಶಗಳಲ್ಲಿ ಕೊಳಗಳಿಗೆ ಬಿಸಿನೀರು ತುಂಬಿ ವರ್ಷವಿಡೀ ಉಪಯುಕ್ತವಾಗುವಂತೆ ಮಾಡಲಾಗುತ್ತದೆ. ಅತ್ಯಂತ ವಿಸ್ತಾರವಾದ ಬಿಸಿನೀರಿನ ಈಜುಕೊಳ ಮಾಸ್ಕೊದಲ್ಲಿದೆ. ಅದು ವರ್ತುಳಾಕಾರದ ಕೊಳ. ಮಕ್ಕಳಿಗೆ ಸ್ಪರ್ಧಿಗಳಿಗೆ, ಕಲಿಯುವವರಿಗೆ, ಮುಳುಗೇಳಲು, ವಾಟರ್‍ಪೋಲೋವಿಗೆ ಅನುಕೂಲಗಳಿದ್ದು ಇದರಲ್ಲಿ ಏಕಕಾಲದಲ್ಲಿ 2,000 ಈಜುಗಾರರಿಗೆ ಅವಕಾಶವಿದೆ. ಭಾರತದಲ್ಲಿ ಈಜುಕೊಳಗಳು ವಿರಳ. ಬಹುವಾಗಿ ಪುರಸಭೆಗಳು ಇಂಥವನ್ನು ನಿರ್ಮಿಸುತ್ತವೆ. ಈಜು ಕೂಡ ಇನ್ನೂ ಜನಪ್ರಿಯವಾಗಬೇಕಾಗಿದೆ, ವಿಕಾಸಗೊಳ್ಳಬೇಕಾಗಿದೆ. 		(ಯು.ವಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ